Saturday 1 February 2014

               

                             ಹೀಗೊಂದು ಪತ್ರ 


ಪ್ರೀತಿಯ ಸಂಗಾತಿಗೆ,
                 ನಿನ್ನ ನೆನಪ ಮಳೆ ಸುರಿದಾಗ ನನ್ನ ಮನದಲ್ಲಿನ ದುಃಖದ ಅಣೆಕಟ್ಟಿನ ಒಂದೊಂದೇ ಬಾಗಿಲುಗಳನ್ನು ತೆರೆಯಲಾಗುತ್ತದೆ. ಕಣ್ಣೀರ ಜಲಪಾತ ಭೊರ್ಗರೆಯುತ್ತದೆ. ನಂತರ ಮನದ ಭೂಮಿಯಲ್ಲಿ ಬಿರುಬೇಸಿಗೆ. ನೀರಿನಂಥ ಭಾವನೆಗಳಿಗೆ ಬರ. ಕನಸುಗಳಿಲ್ಲದೆ ಕಣ್ಣಿಗೆ ದಾಹ. ಮತ್ತೆ ನಿನ್ನ ಹೊಸ ಅವತಾರ. ನಿನ್ನ ನೆನಪೆಂಬುದು ನೆತ್ತಿ ಸುಡುವ ಬಿಸಿಲು, ಮೈ ಕೊರೆವ ಚಳಿ. ಪ್ರಳಯಾಂತಕವಾಗುವಂಥ ಪ್ರವಾಹ. ಇದು ಅದೆಷ್ಟೋ ವರ್ಷಗಳಿಂದ ಆಗುತ್ತಿರುವ ನಿತ್ಯ ಅನುಭವ.
                  ನಗುವ ಹಿಂದಿನ ನೋವನ್ನು ಬಲ್ಲವನು ನೀನು. ಕಣ್ಣೀರ ಹಿಂದಿನ ಕಾರಣವನ್ನು ಕ್ಷಣದಲ್ಲಿ ತಿಳಿಯುತ್ತಿದ್ದ ಮಾಯಾವಿ. ಅದೆಲ್ಲಿ ಮರೆಯಾಗಿ ಹೋದೆಯೋ : ನನ್ನಲ್ಲಿ ನಿನ್ನ ಬಿಂಬವ ಉಳಿಸಿ. ನಿನ್ನ ಭೂತಕಾಲವನ್ನು ನೀನು ಮರೆಯುವವನಲ್ಲ ಎನ್ನುವುದ ನಾ ಬಲ್ಲೆ. ಆದರೆ ಬಾರದೆ ಹೀಗೇಕೆ ಸತಾಯಿಸುತ್ತಿರುವೆ ಎಂದು ದೇವರಾಣೆ ತಿಳಿಯುತ್ತಿಲ್ಲ ಗೆಳೆಯಾ. ನೀನಿಲ್ಲದ ಬದುಕನ್ನು ಕನಸಲ್ಲೂ ಊಹಿಸದ ನಾನು ಇಂದು  ನೀನಿಲ್ಲದೇ ಕಳೆಯುತ್ತಿದ್ದೇನೆ. ನಿನ್ನಾಣೆ, ನಾನು ದುಃಖದಲ್ಲಿಲ್ಲ. ಬದಲಾಗಿ ಆಭಾರಿಯಾಗಿದ್ದೇನೆ ಆ ದೇವರಿಗೆ, ನಿನಗೆ.  ನಿನ್ನನ್ನು ದೂರ ಮಾಡಿದ್ದಕ್ಕೆ ಆ ದೇವರಿಗೆ ಒಂಚೂರೂ ಬಯ್ಯಲಿಲ್ಲ ನಾನು. ಅಕಸ್ಮಾತ್ ನಿನ್ನನ್ನ ಕೊಡದೇ ಇದ್ದಿದ್ದರೆ ನನಗೆ ಬದುಕುಳಿಯಲು ಕಾರಣವಾದರೂ ಏನಿತ್ತು ಹೇಳು? ನನ್ನಲ್ಲಿ ನಿರೀಕ್ಷೆ, ಆಸೆಗಳೇ ಇರಲಿಲ್ಲ ನೀ ಬರುವ ಮೊದಲು. ಸಾಯಲಾಗುತ್ತಿಲ್ಲ ಎಂದು ಬದುಕುತ್ತಿದ್ದೆ ಅಷ್ಟೇ. ನಿ ಬಂದೆ ನೋಡು.... ಆಸೆಗಳ ಮಹಾಪೂರವನ್ನೇ ಹೊತ್ತುಕೊಂಡು.! no entry ಎಂದು ಮನಸಿನ ಬಾಗಿಲಿಗೆ ಬರೆದಿದ್ದರೂ ನೀ ಲೆಕ್ಕಿಸದೇ ಒಳ ಬಂದೆ.
ಶುರುವಾಯಿತು ನನ್ನಲ್ಲಿ ಹುಮ್ಮಸ್ಸು, ಸೂಖಾಸುಮ್ಮನೆ ಖುಷಿಯಾಗಿರುವ ಖಾಯಿಲೆ. ನಿನ್ನನ್ನ ನೆನಪಿಸಿಕೊಳ್ಳುವ ಚಟ. ನಿನ್ನ ನೋಡಲು, ಸಾಂತ್ವನ ಪಡೆಯಲು ಸುಳ್ಳೇ ಮುನಿಸಿನ ನಾಟಕ.
               ಸಮಯ ಕಳೆಯಲು ಹೆಣಗಾಡುತ್ತಿದ್ದ ನನಗೆ , ನನ್ನ ಸಲುವಾಗೇ ಸಮಯವಿಲ್ಲದ ಹಾಗಾಯ್ತು. ನನ್ನ ಮುಂಜಾವು, ನನ್ನ ಸಂಜೆ, ರಾತ್ರಿಗಳೆಲ್ಲ ನಿನ್ನದಾದವು. ಹಗಲಲ್ಲಿ ನಿನ್ನ ನೆನಪು, ರಾತ್ರಿ ನಿದ್ದೆ ಬಂದರೆ ನಿನ್ನದೇ ಕನವರಿಕೆ. ನಾ ಹೇಗೆ ಹೇಳಲಿ ನಿನ್ನೆಡೆಗಿರುವ ಆ ಪ್ರೀತಿ, ಆ ಪ್ರೇಮ, ಆ ಆರಾಧನೆ. !!!!! ಎಲ್ಲವನ್ನೂ ಸವಿದು, ಸಂತೃಪ್ತಿ ಹೊಂದಿ, "ನನಗೆ ಬದುಕೆಂಬುದಿದ್ದರೆ ಅದು ನಿನ್ನೊಂದಿಗೆ ಮಾತ್ರ" ಎಂಬಂಥ ಪ್ರಮಾಣದಂಥ ಮಾತಾಡಿ  ಇಂದು ಕಾಣದಂತಾಗಿ ಹೋಗಿದ್ದಿ. ಹೋದದ್ದಾದರೂ ಎಲ್ಲಿಗೆ? ನನ್ನಿಂದ ದೂರವೂ ಅಲ್ಲ, ನನ್ನೊಂದಿಗೂ ಇಲ್ಲ. ಕೇವಲ ಮನಸಿಂದ ದೂರ. ಹೀಗೆ ಅಪರಿಚಿತರ ಹಾಗೆ ಬಾಳುವುದರ ಸುಖವಾದರೂ ಏನು?
                 ಜೀವನವೆಂದರೆ ನಾವು ಪ್ರೀತಿಸುವವರ ಸಲುವಾಗಿ, ನಮ್ಮನ್ನು ಪ್ರೀತಿಸುವವರಿಗಾಗಿ ಕೊಂಚ ತ್ಯಾಗವನ್ನೂ ಮಾಡಿದರೂ ಅವರೊಟ್ಟಿಗೆ ಸಂತೋಷವಾಗಿ ಇರುವುದೇ ಅಲ್ಲದೆ ಮತ್ತಿನ್ನೇನು? ಗೊತ್ತಿದ್ದರೆ ತಿಳಿಸು. ಯಾವಾಗಲೂ ನೀ ತಿರುಗಿ ಬರುತ್ತೀಯೆಂದು ಕಾಯುತ್ತಿರುತ್ತೇನೆ; ಖುಷಿಯಿಂದಲೇ. ಬಾಳ್ವೆ ಹೇಳಿ ಕೊಟ್ಟ ಸಂಗಾತಿಗಾಗಿ ನನ್ನೀ ಬಾಳು ಮೀಸಲು.