Sunday 14 July 2013


                                            ನ(ಕ)ನಸು 

                        ಒಂದು ದಿನ ಇದ್ದಕ್ಕಿದ್ದಂತೆ ನೀನು ಪ್ರತ್ಯಕ್ಷವಾಗಿ ನನ್ನು ಬೀಚಿಗೆ ಕರೆದೊಯ್ಯುತ್ತಿ, ಅಲ್ಲಿ ಅನೇಕ ಪ್ರೆಮಿಗಳಿರುತ್ತಾರೆ. ನಾವು ಅವರಂತಿರದೆ ಇಬ್ಬರೇ ಬೀಚಿನ ನೆರಳ ಪ್ರದೇಶಕ್ಕೆ ಬಂದು ಕುಳಿತುಕೊಳ್ಳುತ್ತೇವೆ. ನಿನ್ನ ಭುಜಕ್ಕೆ ಆನಿಕೊಂಡ ನಾನು ಹಾಗೇ ಸಾಗರದ ಆರ್ಭಟವನ್ನು ನೋಡತೊಡಗಿ ಅದರಲ್ಲೇ ತಲ್ಲೀನಳಾಗಿಬಿಡುತ್ತೇನೆ. ನನ್ನ ಮನಸಲ್ಲಿ- "ನೀನು ಸಾಗರ ತೇರ. ನನ್ನನ್ನು ಕೈ ಚಾಚಿ ಕರೆಯುತ್ತಿ. ನಾನು ಕಡಲ ಅಲೆ. ನಿನಗೆ ನನ್ನ ಪ್ರೀತಿಯ ಸ್ಪರ್ಶ ತೋರಿಸಿ, ಅದರ ಬಿಸಿ ಆರುವ ಮುನ್ನವೇ ಮತ್ತೆ ಓಡಿಬಂದು ನಿನ್ನ ಸೇರುತ್ತೇನೆ... ಇದು ಪ್ರಪಂಚವಿರುವವರೆಗೆ ಅಪ್ರಯತ್ನವಾಗಿ ನಡೆವ ನಿರಂತರ ಕ್ರಿಯೆ:ಪ್ರೀತಿಯ ಹಾಗೆ.." ಎಂದು ಯೋಚನೆ. ಬಹಳ ಅಂದರೆ ಬಹಳ ಹೊತ್ತಿನವರೆಗೆ ನಾವು ಮಾತನ್ನೇ ಆಡುವುದಿಲ್ಲ. ಆ ಮೌನ ಅಸಹನೀಯವಲ್ಲ. ನಿನ್ನೊಂದಿಗಿರುವಾಗ ಮಾತಿಗಿಂತ ಮೌನವೇ ಇಷ್ಟ. ಆ ಮೌನದಲ್ಲೂ ಅದೆಂಥ ಭರವಸೆ, ಅದೆಷ್ಟು ನೆಮ್ಮದಿ.!
                     ಕಡಲ ಮೊರೆತದಲ್ಲೇ ಲೀನವಾದ    ನಾನು ನಿದ್ದೆಯಿಂದೆದ್ದಂತೆ ಒಮ್ಮೆ ಬೆಚ್ಚಿ ಪಕ್ಕಕ್ಕೆ ನೋಡಿದರೆ ನನ್ನನ್ನೇ ಎವೆಯಿಕ್ಕದೆ, ಅಪ್ಯಾಯಮಾನವಾದ ಪ್ರೀತಿ ಕಂಗಳಿಂದ ನೋಡುತ್ತಿರುವ  ನೀನು. ಹೇಗೋ ಇಬ್ಬರಿಗೂ ತಿಳಿಯುತ್ತೆ; ಇಬ್ಬರೂ ಒಂದೇ ಯೋಚನೆ ಮಾಡುತ್ತಿರುವುದು. ಏಕೋ ಸಮುದ್ರ ನೋಡಿದರೆ ನೀರ ಆರ್ಭಟ ತುಸು ಹೆಚ್ಚಾಯ್ತು. ಏಕೆಂದರೆ ಬಾನೆಲ್ಲ ಕೆಂಪಾಗಿರುತ್ತದೆ. ಒಹ್! ಸೂರ್ಯನಿಗೆ ನಮ್ಮನ್ನು ನೋಡಿ ಅಸೂಯೆ ಮೂಡಿ ತಾನೇ ಮರೆಗೆ ಸರಿಯುತ್ತಿದ್ದಾನೆ. ನೀನು ನನ್ನ ತಲೆ ನೇವರಿಸಿ, ಹಣೆಗೊಂದು ಹೂಮುತ್ತು ನೀಡುತ್ತೀ. ನಿನ್ನ ಬಾಹುಗಳಲ್ಲಿ ಭದ್ರವಾದ ನಾನು ನಿನ್ನೊಂದಿಗೆ ನಡೆಯುತ್ತೇನೆ. "ನೀನೆಲ್ಲಿಗೆ ಕರೆದೊಯ್ಯುತ್ತಿ?" ಅಂತ ನಾ ನಿನ್ನ ಕೇಳುವುದಿಲ್ಲ. ನೀನು ಎಲ್ಲೆಂದರಲ್ಲಿ ಬರಲು ನಾನು ತಯಾರು, ನೀ ಬಳಿಯಿರಬೇಕಷ್ಟೇ. 
                     ನಡೆಯುತ್ತ ನಡೆಯುತ್ತ ನೀ ನನ್ನ ಕಣ್ಣು ಮುಚ್ಚುತ್ತಿ, ಸ್ವಲ್ಪ ಮುಂದೆ ಹೋಗಿ ಕಣ್ಣ ತೆರೆದರೆ, ನಂತರ! ನಿನ್ನದೊಂದು ಒಹ್!sorry! ನಮ್ಮದೊಂದು ಪುಟ್ಟ ಮನೆ. ಆ ಹೊತ್ತಿಗಾಗಲೇ ನಿನಗೆ ನನ್ನನ್ನು ಪಡೆದ  ನೆಮ್ಮದಿ. ನನಗೆ ಆನಂದದಿಂದ ತೇವಗೊoಡಿದ್ದು ಕಣ್ಣ ತುದಿ.  ನಿನ್ನ ಕಣ್ಬೆಳಕಾಗಿ ನಾನು, ನನ್ನ ಜೀವ ನೀನು ಆಗಿ ಮನೆಯೊಳಗೆ ಒಟ್ಟಿಗೆ ಕಾಲಿಟ್ಟು, ನಾವಿಬ್ಬರೇ ನಿಂತು ಮಾಡಿಕೊಂಡ ಮದುವೆ, ಗೃಹಪ್ರವೇಶ. 
                         ಸಂತೋಷದಿಂದಾಗಿ ಅಳುತ್ತಿದ್ದಾಗಲೇ ಎಚ್ಚರಾಗಿ 'ಅದೊಂದು ಕನಸು' ಅನ್ನೋದು ಸಾಬೀತಾಗದಿದ್ದರೆ ಬಹುಶಃ  ಬೆಳಿಗ್ಗೆ ಎದ್ದು 'ನನ್ನವನು ಎಲ್ಲಿ?' ಎಂದು ಹುಡುಕುತ್ತಿದ್ದಳೇನೋ ಈ ನಿನ್ನ ಹುಚ್ಚಿ. 
ಇಂತಹ ಸಾವಿರಾರು ಕನಸುಗಳ ಸುತ್ತ ನಿನ್ನನ್ನೇ ಕೇಂದ್ರವಾಗಿಸಿಕೊಂಡು ಬಾಳುತ್ತಿದ್ದೇನೆ, ಬರದೆ ಇರಬೇಡ. 


                                                           ಜೀವನದ ತುಂಬ ನಿನ್ನವಳು  

No comments:

Post a Comment